ನನಗಿಷ್ಟವಾದ ಒಂದು ಪೇಜ್

ಭಾರತದಲ್ಲಿ ಅಡ್ದಾಡುತ್ತಿರುವ ಮಹಾ ಮಾರಿ!

ಮಹಾ ಮಾರಿ ಮತ್ಯಾವುದೂ ಅಲ್ಲ ಅದು ಕೋಮು ದ್ವೇಷ/ಮತೀಯ ದ್ವೇಷವೇ ಆಗಿದೆ! ಮತೀಯ ದ್ವೇಷ ಬಾರತದ ಅಭಿವೃದ್ದಿಗೆ ಇರುವ ಒಂದು ಮಹಾ ತಡೆ. ಇದು ನೂರಕ್ಕೆ ನೂರು ಸತ್ಯ. ಅಲ್ಲ, ಕೊಳೆತ ರಾಜಕೀಯ ಅನ್ನುವಿರಾ? ಆಗಲಿ, ಆದರೆ ಅದಕ್ಕೂ ಕಾರಣ ಈ ಮತೀಯ ದ್ವೇಷವೇ ಅಲ್ಲವೇ? ಒಂದು ಪಕ್ಷ ಬಹುಸಂಖ್ಯಾತರ ರಕ್ಷಕರಾಗಿ ಅವರ ಬಲದಿಂದ ಆಡಳಿತದತ್ತ ನಡೆದರೆ, ಇನ್ನೊಂದು ಪಕ್ಷ ಇನ್ನೊಂದು ಸಮೂಹದ ರಕ್ಷಕರಾಗಿ ಬೊಗಳೆ ಬಿಡುವರು, ಮಗದೊಬ್ಬ ಜಾತ್ಯಾತೀತನಾಗಿ ಇಬ್ಬರ ಜಗಳದ ಲಾಭ ಪಡೆಯಲೊರಡುವನು! ಇಲ್ಲಿ ಪಕ್ಷಗಳ ಮತ್ತು ಅಭ್ಯರ್ಥಿಗಳ ಆಳುವ ಸಾಮರ್ಥ್ಯ ನೋಡದೆ, ರಕ್ಷಕನೆಂದು ಬೊಗಳೆ ಬಿಡುವವನಿಗೆ ಓಟು ಹಾಕಿ ತಾನೇ ಮಹಾ ಸಾದಕ ಅಂದು ಕೊಳ್ಳುವ! ಆದರೆ ಅವನಿಗೆ ತಿಳಿಯಲಿಲ್ಲ ಅವನೆಷ್ಟು ಮುಟ್ಟಾಳ ಎಂಬುದು! ಇನ್ನು ಕೆಲವರು "against corruption" ಹೊರಾಡುವರು, ರಾಜಕೀಯ ಬದಲಾವಣೆಗೆ ಕೂಗುವರು! ಆದರೆ ಅವರಿಗ್ಯಾಕೆ ತಿಳಿಯಲಿಲ್ಲ ಈ ಮತೀಯ ದ್ವೇಷವೇ ಇದರ ಮೂಲ ಎಂಬುದು? ಮೊದಲು ಈ ಪಿಡುಗು ನೀಗಿಸಿದರೆ ರಾಜಕೀಯ ಬದಲಾವಣೆ ಬಹಳ ಸರಳ ಎಂಬುದು ಇವರ ಮಹಾ ಬುದ್ದಿಗೆ ತೊಚಲಿಲ್ಲವೇ?
ಹೆಚ್ಚುತಿರುವ ಮತೀಯ ದ್ವೇಷಗಳಿಗೆ ಪರಿಹಾರ ಬೇಡವೇ? ಅಲ್ಪಸಂಖ್ಯಾತನಾಗಲೀ ಬಹುಸಂಖ್ಯಾತನಾಗಲೀ ಅವನಿಗೆ ತನ್ನಸ್ತಿಕೆ ಅನ್ನುವುದು ಇದ್ದೇ ಇರುತ್ತದೆ. ಹೀಗಿರುವಾಗ ಯಾರೇ ಆಗಲಿ, ಎಷ್ಟು ಬಲಿಷ್ಟನೆ ಆಗಲಿ, ಎಷ್ಟು ಶಕ್ತಿ ಹೀನನೆ ಆಗಲಿ ತನ್ನಸ್ತಿಕೆಗಾಗಿ ಹೊರಾಡುವುದಿಲ್ಲವೇ? ಆದರೆ ಹೋರಾಟದ ದಾರಿಗಳು ಅವರ ಸ್ತಿತಿಗನುಸಾರ ಬದಲಾಗಬಹುದು ಅಷ್ಟೇ! ಇದರ ಫಲವೇ ಅಭದ್ರ ಸಮಾಜ! ಇದರಿಂದ ಬರುವ ನಷ್ಟಗಳು ಒಂದುಕಡೆಗೆ ಮಾತ್ರ ಸೀಮಿತವಾಗಿರಲಾರದು ಎಂಬುದು ಸಹ ತಿಳಿದ ಸಂಗತಿ.ನಮಗೆ ಸ್ವಾತಂತ್ರ್ಯ ಸಿಕ್ಕಿ ೬ ದಶಕಗಳೇ ಕಳೆದಿವೆ, ಇನ್ನೂ ನಾವು ಪರಂಗಿಗಳ ಒಡೆದು ಆಳುವ ಕುತಂತ್ರದ ಬಲಿಪಶುಗಳಾಗಿ, ದೇಶದ ಅಭಿವೃದ್ದಿಗೆ ಮಾರಕವಾಗಿ ಸಾಗಬೇಕೆ? ಒಂದಂತು ಸತ್ಯ, ಈಗ ಇರುವುದು ಒಡೆದು ಗಳಿಸುವ ಕುತಂತ್ರ! ಇದು ಬರೀ ಆಳ್ವಿಕೆಗೆ ಸೀಮಿತವಾಗದೆ ಎಲ್ಲ ಬಗೆಯ ಗಳಿಕೆಗೂ ಉಪಯೋಗಿಸುತಿದ್ದಾರೆ! ರಾಜಕೀಯದಲ್ಲಿ ಮಾತ್ರವಲ್ಲದೆ, ಎಲ್ಲೆಲ್ಲೂ ಇದರ ಉಪಯೋಗ ವಿಸ್ತಾರಗೊಂಡಿದೆ! ಯೋಚಿಸಿ, ಪ್ರಜ್ಞಾವಂತ ಪ್ರಜೆಗಳಾಗಿ ಬವಿಷ್ಯದ ಆಪತ್ತುಗಳ ಅರ್ಥಮಾಡಿಕೊಳ್ಳಿ. ಭಾರತವನ್ನು ಇದರಿಂದ ಮುಕ್ತವಾಗಿಸುವತ್ತ ಹೆಜ್ಜೆ ಇಡೋಣ.
ಕಾರಣಗಳು ಹೇಳುವುದಾದರೆ ಮೊದಲನೆಯದು ಪರಸ್ಪರರ ಬಗೆಗಿನ ತಪ್ಪು ಗ್ರಹಿಕೆ, ಇದಕ್ಕೆ ಪರಂಗಿಗಳ ಕುತಂತ್ರ ಮೈಗೂಡಿಸಿಕೊಂಡ ಶಕುನಿಗಳ ಅಪಪ್ರಚಾರ ಮತ್ತು ಅವರ ಅಪಬೋದನೆಗಳ ಸಹಾಯ, ಹಾಗೆಯೇ ಧರ್ಮದ ಬಗೆಗೆ ಅಲ್ಪಜ್ಞಾನಿಗಳಾದ ಧರ್ಮಾನುಯಾಯಿಗಳು ತಮ್ಮ ಅಲ್ಪ ಜ್ಞಾನದಿಂದಾಗಿ ಎಸಗುವ ತಪ್ಪುಗಳಿಂದ ಪರ ಧರ್ಮೀಯರಿಗೆ ಆ ಧರ್ಮದ ಮೇಲೆ ಉಂಟಾಗುವ ತಪ್ಪು ಗ್ರಹಿಕೆ. ಕೆಲವು ಬುದ್ದಿ ಹೀನರ ಆಮಿಷದ ಮತಾಂತರ ನೀತಿ! ಇನ್ನು ಕೆಲವರ ಚರಿತ್ರೆ ಹಿಡಿದು ವರ್ತಮಾನ ಹಾಳುಮಾಡುವ ಹುಚ್ಚುತನ. ಎಲ್ಲಕಿಂತ ಮಿಗಿಲಾಗಿ ತಿರುಚಲ್ಪಟ್ಟ, ಒಡೆದು ಆಳುವ ನೀತಿಯ ಸ್ಪರ್ಶದಿಂದ ಲೇಪಿತವಾದ ಚರಿತ್ರೆಗಳು! ಇನ್ನು ಕೆಲವರಿಗೆ ಬಹುಸಂಖ್ಯಾತರೆಂಬ ಹುಂಬು! ಅವರಲ್ಲೇ ಕೆಲವರಿಗೆ ಇತರರನ್ನು ಕಾಲಕೆಳಗೆ ತಂದು ಗೂಂಡಾಗಿರಿ ಮಾಡುವ ಆಸೆ!
ಪರಿಹಾರದತ್ತ ನೋಡುವುದಾದರೆ ಎಲ್ಲ ಸಮಸ್ಯೆಗಳನ್ನೂ ತಳದಿಂದ ಪರಿಹರಿಸುತ್ತಾ ಬಂದರೆ ಈ ಸಮಸ್ಯೆ ಮೇಲಿನಿಂದ ಪರಿಹರಿಸುತ್ತಾ ಬರಬೇಕಾಗಿದೆ! ಯಾಕೆಂದರೆ ಇದರ ಬೇರು ಮೇಲ್ಬಾಗದಲ್ಲಿದೆ. ಆದರಿಂದ ಎಲ್ಲ ಧರ್ಮದಲ್ಲೂ ಇರುವ ಮೇಲ್ಪದರದ ನಾಯಕರು ತಮ್ಮಲ್ಲಿರುವ ಅಪನಂಬಿಕೆ ಹೋಗಲಾಡಿಸಿ, ಪರಸ್ಪರ ವಿಶ್ವಾಸ ವೃದ್ದಿಸಿಕೊಳ್ಳುವುದು ಮೊದಲ ಹೆಜ್ಜೆ. ತದನಂತರ ಆ ನಂಬಿಕೆಯನ್ನೂ, ಪರಸ್ಪರರ ಮೇಲಿನ ಗ್ರೆಹಿಕೆಯನ್ನೂ ಆಯಾಯ ನೇತೃತ್ವ ತಳಬಾಗಕ್ಕೆ ಇಳಿಯಬಿಡಬೇಕು. ಇದು ಅಷ್ಟೊಂದು ಕಷ್ಟವಲ್ಲದಿದ್ದರೂ ಒಂದೊಂದು ಸಮುದಾಯದಲ್ಲೂ ಪಕ್ವತೆಯ ನೇತೃತ್ವ ಇರಬೇಕು, ಅಲ್ಲದೆ ಅವರು ಶಾಂತಿ ಪ್ರಿಯರೂ ಮಾನವೀಯತೆಯುಳ್ಳವರೂ ಆಗಿರಬೇಕು! ಇಲ್ಲಿ ಎಚ್ಚರಿಸಲೇ ಬೇಕಾದ ಅವಶ್ಯಕತೆ ಎಂದರೆ ಇವರು ಯಾರೂ ರಾಜಕೀಯದ ನಂಟುಗಾರರಲ್ಲದ ಹಾಗೆ ನೋಡಿಕೊಳ್ಳಬೇಕಾದುದು ಆ ಸಮುದಾಯದ ಹೊಣೆಯಾಗಿದೆ. ಪರಸ್ಪರ ಧರ್ಮಗಳ ಬಗ್ಗೆ ಅರಿವು ಮೂಡಿಸುವುದು ಇದರಲ್ಲಿ ಮುಖ್ಯ ಬಾಗವಾಗಬೇಕು. ಹಾಗೆಯೇ ಸಮುದಾಯಗಳ ಮದ್ಯೆ ಬರುವ ಪ್ರತಿಯೊಂದು ಸಮಸ್ಯೆಗಳೂ ಈ ನೇತಾರರ ಮೂಲಕ ಪರಿಹಾರ ಕಾಣಬೇಕು.

ಇತಿಹಾಸಕ್ಕೆ ಜಾತಿ ಲೇಪ ಹಚ್ಚಿದ ನೈಜ ದೇಶದ್ರೊಹಿಗಳು!

ಕೋಪಿಷ್ಟರಾಗಬೇಡಿ! ಇದು ನಿಜ, ಇದರ ಮರ್ಮ ತಿಳಿಯ ಬೇಕೆಂದರೆ ಮೊದಲು ಪ್ರಜಾಪ್ರಭುತ್ವಕ್ಕೂ ರಾಜಾಡಳಿತಕ್ಕೂ ಇರುವ ವ್ಯತ್ಯಾಸ ಅರಿಯಬೇಕು. ಇಂದು ಇದರ ಬಗ್ಗೆ ಏನೂ ತಿಳಿಯದ ಮೂರ್ಖರು ತಿರುಚಿದ ಇತಿಹಾಸ ಹೇಳುವುದರಲ್ಲಿ ಮೊದಲಿಗರು! ಅವರು ಕೆಲ ಮತಾಂದರ, ಹೊಲಸು ರಾಜಕಾರಣಿಗಳ ಗೂಡ ಮನಸ್ಸು ತಿಳಿಯದೆ ಅವರು ಪ್ರಚಾರ ಪಡಿಸುವ ತಿರುಚಲ್ಪಟ್ಟ ಇತಿಹಾಸ ನುಂಗಿ ಅದನ್ನೆ ಜೀವವಾಗಿಸಿಬಿಟ್ಟಿದ್ದಾರೆ. ಈ ತಿರುಚಲ್ಪಟ್ಟ ಇತಿಹಾಸದಿಂದಾಗಿ ಭವ್ಯ ಬಾರತದ ಭವಿಷ್ಯ ಇದರ ಪ್ರಥಿಫಲನವಾಗುವತ್ತ ಸಾಗಿದೆ!
ಇದರ ಪರಿಣಾಮಗಳು ಹಲವು, ಪ್ರಮುಖವಾಗಿ ಕೋಮುದ್ವೆಷ ಅದರ ಉತ್ತುಂಗಕ್ಕೆ ತಲುಪುತ್ತಿದೆ, ಧರ್ಮ ಸಹಿಷ್ನುತೆ ಅವನತಿಯತ್ತ ಸಾಗಿದೆ, ನ್ಯಾಯವಾಗಿ ಗೌರವ ದಕ್ಕಬೇಕಾಗಿದ್ದ ಇತಿಹಾಸ ಪುರುಷರಿಗೆ ಅವಮಾನದ ಕಾಲವಾಗಿಬಿಟ್ಟಿದೆ!ಇದೆಲ್ಲದರ ಫಲವಾಗಿ ಕ್ರೌರ್ಯದ ಭಾರತ ನಿರ್ಮಾಣವಾಗುತ್ತಿದೆ! ನೈಜ ಇತಿಹಾಸ ಎಲ್ಲರಿಗೂ ತಲುಪುವಂತೆ ಮಡುವುದೊಂದೇ ಇದಕ್ಕಿರುವ ಪರಿಹಾರ!
ರಾಜಾಡಳಿತದಲ್ಲಿ ರಾಜರ ಮೊದಲ ಆದ್ಯತೆ  ಆಧಿಪತ್ಯ ವಿಸ್ತರಣೆ, ಈ ಸಮಯದಲ್ಲಿ ಅವರೆದುರು ಯಾರು ನಿಂತರೂ ಅವರನ್ನ ಸುಮ್ಮನೆ ಬಿಡುವ ಪ್ರಸಂಗ ಯಾವ ರಾಜರಿಂದಲೂ ಬರದು! ಅದೇ ಅವರ ಪ್ರೌಡಿ, ಅದೇ ಅವರ ಆಧಿಪತ್ಯದ ಚಿನ್ಹೆ! ಈಗಿರುವಾಗ ಒಂದು ರಾಜನ  ಆಧಿಪತ್ಯ ವಿಸ್ತರಣೆಗೆ ಧರ್ಮದ ಲೇಪ ಹಾಕಿ ಈ ಪ್ರಜಾಪ್ರಭುತ್ವ ವ್ಯವಸ್ತೆಯಲ್ಲಿ ಕೊಮುದ್ವೆಷ ಹರಡುವುದು ಎಷ್ಟರ ಮಟ್ಟಿಗೆ ಸರಿಯಾಗಬಹುದು? ಅಲ್ಲದೆ ಒಬ್ಬ ರಾಜ ಇನ್ನೊಬ್ಬನನ್ನು ಸೊಲಿಸಿ ತನ್ನ  ಆಧಿಪತ್ಯ ವಿಸ್ತರಿಸಿದಾಗ ಆ ಪ್ರದೆಶದ ಸರ್ವ ಸಂಪತ್ತು ಅವನ ಹಿಡಿತಕ್ಕೆ ಬರುತ್ತದೆ, ಇದು ರಾಜ ನೀತಿ! ಈಗಿರುವಾಗ ಅದಕ್ಕೂ ಧರ್ಮದ ಲೇಪ ಹಾಕಿ, ಆ ಧರ್ಮದವರು ದೂಚಿದರು ಎಂಬ ತಿರುಚುವಿಕೆ ಎಷ್ಟು ಹೇಯ ಷಂಡತನ ಅಲ್ಲವೇ?
ಆ ಕಾಲದಲ್ಲಿ ಬಲಿಷ್ಟರು ತಮ್ಮ ಅಧಿಕಾರ ವಿಸ್ತರಣೆಯತ್ತ ಸಾಗಿದ್ದರೆ, ಚಿಕ್ಕ ಪುಟ್ಟ ರಾಜರು ಅವರ ಆಧಿಪತ್ಯ ಉಳಿಸುವತ್ತ ಕಣ್ಣು ನೆಟ್ಟಿದ್ದರು! ಎಲ್ಲದರ ಮದ್ಯೆ ಶಕುನಿಯಾಗಿ ಬಂದವನೇ ಪರಂಗಿಯೆಂಬ ಭೂತ! ಇವರು ಈ ದೆಶಕ್ಕೆ, ಅಲ್ಲ ಈ ವಿಶ್ವಕ್ಕೇ ಕೊಳ್ಳಿ ಇಟ್ಟ ಸ್ವಾರ್ಥಿಗಳು! ಈಗಲೂ ಮಾಡುವಂತೆ ಬಲಿಷ್ಟ ಶತ್ರುವಿನ ಪಕ್ಕದಲ್ಲಿರುವ, ಶತ್ರುವಿನ ಶತ್ರುವಿಗೆ ಮಿತ್ರನಂತೆ ನಟಿಸಿ ತೋರಿಸಿ, ಅವನೊಂದಿಗೆ ಸೇರಿ ಬಲಿಷ್ಟನನ್ನು ಸೊಲಿಸಿ ಇಬ್ಬರನ್ನು ತನ್ನ ತೆಕ್ಕೆಗೆ ಹಾಕುವ ನೀತಿಯೊಂದಿಗೆ ಭಾರತಕ್ಕೆ ಬಂದು ಆಳಿ, ತಿಂದುಂಡು, ಬುತ್ತಿ ಕಟ್ಟಿ, ವಿಷ ಬಿತ್ತಿ ಹೋದರು! ಈ ವಿಷವನ್ನೆ ಈಗ ನಮ್ಮಲ್ಲಿರುವ ಷಂಡರು ಸ್ವಾರ್ಥಕ್ಕಾಗಿ ಬಳಸುತಿದ್ದಾರೆ ಎಂದರೆ ತಪ್ಪೇ ಆಗಲಾರದು!
ಇಲ್ಲೊಂದು ವಿಸ್ಮಯವಿದೆ! ತನ್ನ ಅಧಿಪತ್ಯ ರಕ್ಷಣೆಗಾಗಿ ಹಿಂದೂ ರಾಜನೊಬ್ಬ ಪರಂಗಿಗಳ ಸಹಾಯ ಪಡೆದಿದ್ದರೆ ಅದು ಅವನ ಅವಶ್ಯಕತೆಯೆಂದೂ, ಅದನ್ನೇ ಮುಸ್ಲಿಮ್ ರಾಜನೊಬ್ಬ ಮಾಡಿದ್ದರೆ (ಇದು ಕಾಣುವುದು ಕಷ್ಟ) ಅದು ದೇಶ ದ್ರೋಹ ಎಂದು ಲೇಪ ಹಾಕುವ ಮತಾಂದ ದೇಶ ಭಕ್ತರೆಂಬ ದೇಶ ದ್ರೊಹಿಗಳಿಗೆ ಎನೆನ್ನಬೇಕು? ಹಿಂದೂ ರಾಜರ (ಇಲ್ಲಿ ಬೆರೆ ಮತೀಯ ರಾಜರು ಇದ್ದದ್ದೇ ಕಡಿಮೆ) ಮೇಲೆ ಆಕ್ರಮಣ ಮಾಡಿದನೆಂಬ ಕಾರಣಕ್ಕೆ ದೇಶದ್ರೊಹಿ ಪಟ್ಟ ಕಟ್ಟುವ ಮತಾಂದರಿಗೆ ಬುದ್ದಿ ಇರುವುದೆ ಕಾಲ್ಪನಿಕವೆನ್ನಬಹುದು! ಭಾರತದಲ್ಲಿ ಪರಂಗಿಗಳಿಂದ ಸಹಾಯ ಪಡೆದು ಅವರಿಗೆ ಬಾರತದ ಮಣ್ಣಿಗೆ ನುಸುಳಲು ಸಹಾಯ ಮಾಡಿದ ಚಿಕ್ಕ ಪುಟ್ಟ ರಾಜರೆ ನೈಜವಾಗಿ  ದೇಶ  ದ್ರೊಹಿಗಳಾಗಿ ಬಿಂಬಿಸಲ್ಪಡಬೆಕಾದುದು ಎನ್ನುವ ಸತ್ಯ ಇವರಿಗೆ ತಿಳಿಯಲಿಲ್ಲವೆನೊ! ಇಲ್ಲೂ ಸಹಾಯವನ್ನು ಸಮರ್ತಿಸುವ ರೀತಿ ಬಲು ರುಚಿಕರ! ಬಲಿಷ್ಟ ರಾಜ ಮತಾಂದನಾಗಿದ್ದ ಆದರಿಂದ ಅವನ ದರ್ಮದ ಮೆಲಿನಾ ಕ್ರೌರ್ಯದಿಂದ ಪಾರಾಗಲು ಪರಂಗಿಗಳ ಸಹಾಯ ಪಡೆದರು ಎನ್ನುವರು! ಇದನ್ನ " ಧರ್ಮ ರಕ್ಷಣೆಗಾಗಿ ದೇಶ ಸುಟ್ಟರು" ಎನ್ನಬಹುದೆ? ಸತ್ಯದಲ್ಲಿ ಎಲ್ಲ ರಾಜರಂತೆ ಅವನು ಅವನ ಅಧಿಕಾರ ರಕ್ಷಣೆಯ ಮೋಹದಿಂದ ಪರಂಗಿಗಳ ಬಲೆಗೆ ಬಿದ್ದ ಅಷ್ಟೆ, ಹಾಗೇ ಬಲಿಷ್ಟ ಅವನ ಅಧಿಕಾರ ವಿಸ್ತರಣೆಗಾಗಿ ದಾಳಿ ಮಾಡುತಿದ್ದ ಅಷ್ಟೆ!

ಕರ್ಣಾಟಕದ ಮಟ್ಟಿಗೆ ಹೇಳುವುದಾದರೆ ಮೇಲಿನ ಪ್ರಸಂಗಕ್ಕೆ ಉದಾಹರಣೆ ತನ್ನ ರಾಜ್ಯವನ್ನ ಅತಿಯಾಗಿ ಪ್ರೀತಿಸಿದ, ಪರಂಗಿಗಳ ಸಿಂಹ ಸ್ವಪ್ನವಾಗಿದ್ದ ಟಿಪ್ಪು ಸುಲ್ತಾನ್. ಅರಮನೆಯ ಮುಂದೆಯೇ ದೇಗುಲಗಳಿಗೆ ಅವಕಾಶ ಕೊಟ್ಟಿದ್ದರೂ, ಆಸ್ತಾನದಲ್ಲಿ ಹಿಂದುಗಳಿದ್ದರೂ ಇವನಿಗೆ ಮತಾಂದ ಪಟ್ಟ! ಕಾರಣ ರಾಜ್ಯ ವಿಸ್ತರಣೆ ವೇಳೆ ಎದುರು ನಿಂತವರನ್ನು ನಿರ್ನಾಮ ಮಾಡಿದ, ಅದರಲ್ಲಿ ಅನೇಕರು ಹಿಂದುಗಳು ( ಕಾರಣ: ಎದುರು ಇತರ ದರ್ಮೀಯ ರಾಜರು ಇರಲಿಲ್ಲ ಎನ್ನಬಹುದು)! ಇದನ್ನೆ ಒಬ್ಬ ಮತಾಂದ " ಟಿಪ್ಪು ದರ್ಮಾಂದನಾಗಿ ಹಿಂದೂಗಳನ್ನು ಕೊಲ್ಲುತಿದ್ದ, ಆಗ ನಮ್ಮ ರಾಜರು ದರ್ಮ ರಕ್ಷಣೆಗಾಗಿ ಪರಂಗಿಗಳ ಸಹಾಯ ಪಡೆದು ಟಿಪ್ಪುವಿನ ವಿರುದ್ದ ಹೊರಾಡಿದರು" ಎಂಬಂತೆ ಬರಿಯುತಾನೆ! ಅದನ್ನೇ ಕೆಲವು ಪತ್ರಿಕೆಗಳು ಪ್ರಸಾರ ಪಡಿಸುತ್ತವೆ! ಇಲ್ಲಿ ಯಾರು ದೇಶ ದ್ರೋಹಿ? ಅಧಿಪತ್ಯ ರಕ್ಷಣೆಗಾಗಿ ಪರಂಗಿಗಳ ಕೈ ಹಿಡಿದು ಮೋಸ ಹೊದವನೊ ಅಥವಾ ಉಸಿರಿರುವ ತನಕ ರಾಜ್ಯಕ್ಕಾಗಿ ಹೋರಾಡಿದವನೋ? ಇಲ್ಲಿ ನಿಜವಾಗಿಯು ಒಬ್ಬನನ್ನು ದೇಶ ದ್ರೋಹಿ ಎಂದೋ, ಇನ್ನೊಬನನ್ನು ದೇಶ ಪ್ರೆಮಿಯೆಂದೋ, ದರ್ಮ ರಕ್ಶಕನೆಂದೋ ಹೇಳಬೇಕಾಗಿಲ್ಲ, ಬದಲು ಅದು ಅವರ ರಾಜ ನೀತಿಯಾಗಿತ್ತು ಎಂದು ಸುಮ್ಮನಿರುವುದು ಬಿಟ್ಟು, ಇದನ್ನ ದರ್ಮಾಂದರು ಜಾತಿ ಲೇಪ ಹಚ್ಚಿ ಇಂದಿನ ಪ್ರಜಾ ಪ್ರಭುತ್ವ ವ್ಯವಸ್ತೆಯಲ್ಲಿ ಕೋಮು ಭಾವನೆ ಕೆರಳಿಸಿ ಬಹುಸಂಕ್ಯಾತರ ವೊಟು ಗಳಿಸಿ ಪರಂಗಿಯಂತೆ ಅಳಲು ಹೊರಟಿದ್ದಾನೆ!
ಎಚ್ಚೆತ್ತು ಕೊಳ್ಳಬೇಕಾದ ಕರ್ತವ್ಯ ಪೂರ್ಣವಾಗಿಯು ಬಹು ಸಂಕ್ಯಾತರಾದ ಹಿಂದುಗಳ ಮೇಲಿದೆ, ನೀವು ಈ ಮತಾಂದರ ಪರಂಗಿ ನಾಟಕಕ್ಕೆ ತಲೆದೂಗಿ ದೇಶವನ್ನ ಇನ್ನೊಮ್ಮೆ ದರಿದ್ರವಾಗಿಸಬೇಡಿ! ಪ್ರಜಾಬ್ರಭುತ್ವ ವ್ಯವಸ್ತೆಯಲ್ಲಿ ಜಾತಿ ಮತ ಬೇದವಿಲ್ಲದೆ, ಒಗ್ಗಟ್ಟಾಗಿ ಇಂದಿನ ನಮ್ಮ ಸಮಸ್ಯೆಗಳ ನಿರ್ಣಾಮದತ್ತ ಮುನ್ನುಗ್ಗೋಣ. ಭೂತಕಾಲವನ್ನು ಕೆದಕಿ ಲೇಪಿಸಿ ವರ್ತಮಾನ, ಭವಿಷ್ಯವನ್ನು ಹಾಳುಮಾಡುವ ಮೂರ್ಖರು ನಾವಾಗಬಾರದಲ್ಲವೆ?

ಯಾರ ತಪ್ಪ ಹೇಳಲಿ ನಾ ಇಂದು?

ಒಂದು ಕಡೆ ಮತಾಂತರ ಇನ್ನೊಂದು ಕಡೆ ಭಯೋತ್ಪಾದನೆ, ಇದೆರಡನ್ನೂ ಕಂಡು ಪ್ರತಿ ತಂತ್ರದತ್ತ ಹೆಜ್ಜೆ ಇಟ್ಟವರು ಮಗದೊಂದು ಕಡೆ. ಏನಿದು? ಅನಾಚಾರದ ಅಡ್ಡೆಯೆ? ಅಥವ ಭೂಲೊಕದ ನರಕವೆ? ಹೀಗೆ ಪ್ರಶ್ನೆಗಳು, ಚಿಂತೆಗಳು ಉದುರುತ್ತಾ ಹೋಗುತ್ತವೆ. ಇದೆಲ್ಲಾ ಅರೊಪಗಳೇ? ಇಲ್ಲ ಕಂಡಿತಾ ಇದೆಲ್ಲ ನಮ್ಮ ಭಾರತದೊಳಗಡೆ ನಡೆಯುತ್ತಿರುವ ನಿಜ ಸಂಭವಗಳು.
ಇಲ್ಲಿ ನಾನು ನನ್ನ ವೀಕ್ಷಣೆಯಲ್ಲಿ ಭಾರತದ ಪ್ರಮುಖ ಮೂರು ಧರ್ಮಾನುಯಾಯಿಗಳನ್ನ ಪ್ರತಿವಾದಿಯಾಗಿ ವಿಶ್ಲೇಷಿಸುವೆ, ಸರಿಯೋ ತಪ್ಪೋ ತೀರ್ಮಾನ ನಿಮ್ಮದಿರಲಿ. ಹಾಗೆಯೇ ಹೊಗೆಯಾಡುತ್ತಿರುವ ಭಾರತ ನೆಲವ ತಂಪಾಗಿಸುವ ಪ್ರಯತ್ನ ಮುಂದೆ ಸಾಗಲಿ....

ಯಾತಕ್ಕದರೂ ಇವರು ಭಯೋತ್ಪಾದನೆಯಲ್ಲಿ ತೊಡಗಿದ್ದಾರೆ? ಇದಕ್ಕೆ ಸಮರ್ಪಕ ಉತ್ತರ ಯಾರಿಂದಲೂ ಸಾದ್ಯವಿಲ್ಲ. ಇದೊಂದು ನೀಚ ಹಾಗೂ ರಾಕ್ಷಸೀಯ ಪ್ರವೃತ್ತಿ. ತಮ್ಮ ರಕ್ಷಣೆಗಾಗಿ ಅಥವಾ ಶತ್ರುಗಳ ಸಂಹಾರಕ್ಕಾಗಿ ಅಮಾಯಕರ ಬಲಿ ಸಮರ್ಥನೀಯವಾಗಲಾರದು. ಇತರರಿಂದ ತೊಂದರೆ ಇದ್ದರೆ ಅವರ ಮೇಲೆರಗುವ ಬದಲು ಸಹನೆಯಿಂದ ಶಾಂತಿಯ ಪ್ರತೀಕಗಳಾಗಿ ನಿಲ್ಲಬೇಕಾದ ಕರ್ತವ್ಯ ಕಲ್ಲೆಸತದಿಂದಾಗಿ ಮೈಯಿಂದ ರಕ್ತದ ಕೋಡಿ ಹರಿದರೂ ಸಹನೆ ತಾಳಿದ ಪ್ರವಾದಿಯರ ಅನುಯಾಯಿಗಳದ್ದು. ಇನ್ನು ಪಾಕಿಸ್ತಾನದಿಂದ ಭಾರತದೆಡೆಗೆ ಬರುವ ದಾಳಿಯನ್ನು ಸಮರ್ಥಿಸುವವರು ದೇಶಬ್ರಷ್ಟರಾಗುವ ಮೊದಲೇ ಧರ್ಮಬ್ರಷ್ಟರು. ಇನ್ನು ಮುಸ್ಲಿಮ್ ಕಾನೂನುಗಳ ಹೆಸರಲ್ಲಿ ನಡೆಯುವ ಸ್ವಾರ್ಥ ಕಾರ್ಯಗಳನ್ನು ಎಂದೂ ಸಹಿಸಲಾಗದು. ಇದನ್ನೆಲ್ಲ ಬೇರುಸಮೇತ ಕಿತ್ತೊಗೆಯುವ ಕಾರ್ಯ ಬುದ್ದಿವಂತ ಮುಸಲ್ಮಾನರಿಂದ ಸಾದ್ಯವಾಗಬೇಕು. ಶಾಂತಿ ಸಹಬಾಳ್ವೆ ಬಿತ್ತುವ ಧರ್ಮ ಎಂದು ಹೇಳಿ ಸಾಗುವ ಬದಲು ನಿರೂಪಿಸಿ ತೊರಿಸಬೇಕಾದ ಕರ್ತವ್ಯ ಪ್ರಜ್ಞಾವಂತ ಮುಸಲ್ಮಾನರದ್ದು. ಬಹುಸಂಕ್ಯಾತರೊಂದಿಗೆ ಅವರ ಭಾವನೆಗಳಿಗೆ ನೋವಾಗದಂತೆ ತಮ್ಮ ಕಾರ್ಯಗಳನ್ನು ನಿಯಂತ್ರಿಸಿ ಅನ್ಯೂನ್ಯತೆ ಸೃಷ್ಟಿಸುವುದು ಉತ್ತಮ, ಇದು ಒಟ್ಟಾರೆ ಭಾರತಕ್ಕೆ ಒಳಿತ ನೀಡುತ್ತದೆ.
ಇವತ್ತು ಹೆಚ್ಚಾಗಿ ಬಡವರ ಮತಾಂತರ ನಡೆಯುತ್ತಿರುವುದು ವಿಪರ್ಯಾಸ. ಇದರಲ್ಲಿ ಪ್ರಮುಖ ಪಾಲು ಕ್ರೈಸ್ತರದ್ದು. ಇಲ್ಲಿ ಗಮನಿಸಬೇಕಾದ ವಿಷಯ, ನೈಜವಾಗಿ ಯಾವೊಬ್ಬನೂ ತಿಳುವಳಿಕೆಯಿಲ್ಲದೆ, ಅದ್ಯಯನ ಮಾಡದೆ ಒಂದು ಧರ್ಮದ ಕಡೆ ಹೋಗಲಾರ. ಆದರೆ ಇವತ್ತು ತಿಳುವಳಿಕೆ ಇಲ್ಲದ ಅದ್ಯಯನ ಮಾಡದ ಬಡ ಕುಟುಂಬಗಳು ದಿನ ಬೆಳಗಾಗುವುದರಲ್ಲಿ ಮತಾಂತರ ಹೊಂದಿರುತ್ತಾರೆ. ಇದಕ್ಕೆ ಕಾರಣ ಅಮಿಷಗಳೆ ಅಥವ ದೀರ್ಗಕಾಲದ ಒಡನಾಟ, ಭೂದನೆಯೆ? ಏನೇ ಆಗಲಿ ಇದು ಸಮಾಜದಲ್ಲಿ ದ್ವೇಷ ಬಿತ್ತುವುದರಲ್ಲಿ ಸಂಶಯವೇ ಇಲ್ಲ. ಇದನ್ನ ನಿಲ್ಲಿಸಬೆಕಾದ ಕರ್ತವ್ಯ ಶಿಲುಬೆಗೇರಿದ ಕ್ರಿಶ್ತನ ಅನುಯಾಯಿಗಳದ್ದು, ಬೋದನೆ ಮಾಡಲೇ ಬೆಕೆಂದಾದರೆ ಅಮಿಷಗಳ ಬಿಟ್ಟು, ರಹಸ್ಯ ಬೋದನೆ ಬಿಟ್ಟು ಸಾರ್ವಜನಿಕವಾಗಿ ಬೋದಿಸಿ. ಇದು ನಿಮಗೂ ಶೋಬೆ ಇತರರಿಗೂ ಸಮಾದಾನ ತರುವ ವಿಚಾರ. ಅನುಭವಸ್ತರಿಂದ ಕೇಳಿ ತಿಳಿದ ಹಾಗೆ ಮದುವೆಯಲ್ಲಿ, ಕೆಲಸ ಕೊಡುವಲ್ಲಿ, ಶಿಕ್ಶಣ ಸಂಸ್ತೆಗಳ ಸೀಟು ಹಂಚಿಕೆಯಲ್ಲಿ.. ಮತಾಂತರದ ಬಲೆ ಬೀಸುವ ಜಾಯಮಾನ ನಿಲ್ಲಿಸುವ ಕೆಲಸ ಪ್ರಜ್ಞಾವಂತರಾದ ಕ್ರೈಶ್ತವರಿಂದ ಆಗಬೇಕಾದದ್ದು ಅನಿವಾರ್ಯ.
ಇದೆರಡನ್ನೂ ಕಂಡು ಬೇಸತ್ತಿರುವ ಬಹುಸಂಕ್ಯಾತರಾದ ಹಿಂದುಗಳು. ಇವರಲ್ಲಿ ಮೂಡಿರುವ ಪ್ರತಿತಂತ್ರದ ರೋಷ. ಇದಕ್ಕೆ ತಕ್ಕಂತೆ ಕ್ರೈಶ್ತ ಹಾಗೂ ಮುಸಲ್ಮಾನರ ಮೇಲೆ ದ್ವೇಷದ ಬೀಜ ಬಿತ್ತುತ್ತಿರುವ ರಾಮ ಭಕ್ತರೆಂಬ ರಾವಣ ಭಕ್ತರು. ಇದರಿಂದಾಗಿ ಸಂಪೂರ್ಣ ಹೊಗೆಯಲ್ಲಿ ಬೇಯುತ್ತಿರುವ ಭಾರತ. ಬಯೋತ್ಪಾದಕರಿಂದ ಹಿಂದುಗಳು ಸತ್ತರೆಂದು ಪಕ್ಕದ ಮನೆಯ ಮುಸ್ಲಿಮನನ್ನು ದ್ವೇಶಿಸುವುದು ಎಂದಿಗೂ ಸರಿಯಾಗಲಾರದು. ಒಂದು ಕಡೆ ಕ್ರೈಶ್ತ ಮತಾಂತರ ನಡೆಯಿತೆಂದು, ಪ್ರಿಯ ಸ್ನೇಹಿತನ ದೂರ ತಳ್ಳಲು ಪ್ರೇರೇಪಿಸುವುದು, ಒತ್ತಾಯಿಸುವುದು ಭಾರತದ ಏಕತೆಗೆ ಮಾರಕವೇ ಸರಿ. ಚರಿತ್ರೆಗಳಲ್ಲಿ ಮುಸ್ಲಿಮ್ ರಾಜರಿಂದ ಮತಾಂತರ ನಡೆದಿದೆ ಎಂದು ಇಂದಿನ ಪ್ರಜಾಪ್ರಭುತ್ವ ವ್ಯವಸ್ತೆಯಲ್ಲಿ ಮುಸಲ್ಮಾನರ ವಿರುದ್ದ ಕತ್ತಿ ಮಸೆಯುವುದು ರಾಮನ ಆದರ್ಶವಾಗಲಾರದು. ಆ ಕಾಲದಲ್ಲಿ ನಡೆದದನ್ನ ಇಟ್ಟು ದ್ವೇಷ ಕಟ್ಟಿ ಈ ಕಾಲದಲ್ಲಿ ಅಶಾಂತಿಗೆ ಸೊಪ್ಪು ಹಾಕುವುದು ನಿಲ್ಲಲೇ ಬೇಕಾಗಿದೆ. ಹಿಂದುಗಳು ಇದೆಲ್ಲದರ ಪರಿಣಾಮದಲ್ಲಿ ಪಾಲುದಾರರಾಗುವುದನ್ನು ತಪ್ಪಿಸುವ ಕಾರ್ಯ ಭಾರತದ ದೊಡ್ಡಣ್ಣನಂತಿರುವ ಪ್ರಜ್ಞಾವಂತ ಹಿಂಧುಗಳಿಂದ ಆಗಲೇ ಬೇಕಾಗಿದೆ.
ಭಾರತದ ಮೂರು ಭುಜಗಳಂತಿರುವ ಈ ಮೂರು ಧರ್ಮದ ಅನುಯಾಯಿಗಳು ಶಾಂತಿಯತ್ತ ಚಿತ್ತ ಅರಿಸದಿದ್ದರೆ ಭಾರತ ಹೊಲಸೆದ್ದಿರುವ ಪಾಕಿಸ್ತಾನಕ್ಕೂ ಕೀಳಾಗುವುದರಲ್ಲಿ ಸಂಶಯವಿಲ್ಲ. ಆಗಬೇಕಾದ ಕಾರ್ಯವೆಂದರೆ ತಮ್ಮತಮ್ಮಲ್ಲಿರುವ ಹುಳುಕುಗಳ ತಾವೇ ಪರಿಹರಿಸಿಕೊಳ್ಳುವುದು ಮತ್ತು ಇತರರ ಹುಳುಕ ನೋಡಿ ಮೈಮರೆಯುವ ಬುದ್ದಿ ಬಿಡುವುದು.
ಒಳಗಿನ ಕಚ್ಚಾಟ ಭಾರತವ ನಲುಗಿಸುವ ಮುನ್ನ ಎಚ್ಚೆತ್ತುಕೊಳ್ಳೋಣ ...

ಕಥೆಯಾದ ಬದುಕೆಂಬ ಕನಸು-೨

ಮುಂಜಾನೆಯ ಸವಿ ತಂಪಿನಲಿ ಮೂಖನಾದ ನಾನು...
ಹೊರಗಡೆ ತಂಗಾಳಿಯೊಂದಿಗೆ ಮಿಂದು ಸುವಾಸನೆ ಪಸರಿಸುತ್ತಿರುವ ಸುಂದರ ಪರಿಸರ, ಅದರೊಂದಿಗೆ ಕಿವಿ ತಂಪಾಗಿಸುವ ಹಕ್ಕಿಗಳ ಕಲರವ, ಇನ್ನೊಂದು ಕಡೆ ಸೃಷ್ಟಿಕರ್ತನನ್ನು ನೆನೆಯಲು ಜ್ಞಾಪಿಸುತ್ತಿರುವ ಮಂದಿರ, ಮಸೀದಿಗಳ ಕರೆಯೋಲೆ. ಆಗಲೇ ಇದೆಲ್ಲವನ್ನೂ ಸವಿದು ಸೃಷ್ಟಿಕರ್ತನಿಗೆ ನಮಿಸುತ್ತಿರುವ ವಿನಮ್ರಮತಿಗಳು. ಇದೆಲ್ಲದರ ನಡುವೆ ಹಾಯಾಗಿ ಬಿದ್ದುಕೊಂಡಿರುವ ಸೋಮಾರಿಗಳು! ಎಲ್ಲರದ್ದೂ ಒಂದೇ ಇಚ್ಚೆ, ಸಂತೋಷ ತುಂಬಿದ ದಿನ ಬರಲಿ ಎಂಬುದು, ಆದರೆ ಸಿಗುವುದೆಲ್ಲವೂ ದುಃಖ ತುಂಬಿದ ದಿನಗಳೆಂಬ ಅಸಡ್ಡೆ ಇನ್ನೊಂದುಕಡೆ! ಅದಾಗಲೇ ಒಲ್ಲದ ಮನಸ್ಸಿನಿಂದ ಎದ್ದು ಕುಳಿತು ವರ್ತಮಾನ ಮಾತ್ರ ಯೊಚಿಸುವ ಪುಟಾಣಿಗಳು, ಏನೂ ಅರಿಯದ, ಕಪಟತೆಗೆ ಜಾಗವೇ ಇಲ್ಲದ, ಮುದ್ದು ಮನಸ್ಸಿನ ಮುದ್ದು ಸರದಾರರು. ಹೀಗಿದ್ದರೂ ಇವರಲ್ಲಿ ಭಿನ್ನತೆ! ಅಲ್ಲೊಂದು ಮಗುವಿಗೆ ದಿನಕ್ಕೆ ರೂ.500 ಖರ್ಚು, ಆದರೆ ಅಲ್ಲೇ ಇರುವ ಇನ್ನೊಂದು ಮನೆಯ ಮಗುವಿಗೆ ದಿನಕ್ಕೆ ರೂ.5 ಇಲ್ಲದ ದಯನೀಯ ಸ್ತಿತಿ!!! ಇನ್ನು ಕೆಲವು ಇದರ ಮಧ್ಯದವರು. ಒಟ್ಟಿನಲ್ಲಿ ಬೇಕಾದಷ್ಟಿದ್ದರೂ ಸರಿಯಾಗಿ ಹಂಚಿಕೆಯಾಗದ ಜಗತ್ತು. ಒಂದು ಕಡೆ ತನ್ನವರ ಉಪಚಾರದಲ್ಲಿ ಮಿಂದು ಸುಂದರವಾಗಿ ಕಂಗೊಳಿಸುತ್ತಾ, ಸ್ವಚ್ಚವಾಗಿ, ಅರೂಗ್ಯವಂತರಾಗಿ, ಸುಂದರರಾಗಿ ಮಿಂಚುತ್ತಿರುವ, ಸುಖದಲ್ಲಿ ತೇಲುತ್ತಿರುವ ಮುದ್ದು ಮನಸ್ಸಿನ ಯಜಮಾನರು. ಇನ್ನೊಂದು ಕಡೆ ಇದೇ ಹೊತ್ತಿನಲ್ಲಿ ತನ್ನವರ ಪರಿವೆ ಇಲ್ಲದೆ ತುತ್ತು ಅನ್ನಕ್ಕಾಗಿ ಹಪಹಪಿಸುವ, ಪುಟ್ಟ ಪುಟ್ಟ ಕೆಲಸಗಳ ಕನಸ್ಸಿನಲ್ಲಿ ಓಡುವ, ದಾರಿದ್ರ್ಯದ ಬಿಸಿ ಅನುಬವಿಸುವ, ಬದುಕು ಚಿಂದಿಯಾಗಿರುವ ಇನ್ನು ಕೆಲವು ಅದೇ ಮುದ್ದು ಮನಸ್ಸಿನ ಯಜಮಾನರು. ಇದೆಲ್ಲವೂ ಅನುಭವಿಸಬೇಕಾದವರಲ್ಲಿ ಮಕ್ಕಳೂ ಇದ್ದಾರೆ ಎನ್ನುವುದೇ ಹೃದಯದಾಳದ, ಮಾನವೀಯತೆಯ ಕೊರಗಾದ ಸತ್ಯ.
ಹೀಗೆ ಭೂಮಿಗೆ ಕಾಲಿಡುತ್ತಿದ್ದಂತೆ ತಾರತಮ್ಯದ ಬಿಸಿ ಅನುಭವಿಸಲು ಇವರು ಮಾಡಿದ ತಪ್ಪಾದರೂ ಏನು? ಯಾತಕ್ಕಾದರೂ ಈ ರೀತಿಯ ತಾರತಮ್ಯ ತುಂಬಿತುಳುಕುತ್ತಿದೆ? ಆ ದೇವರೇ ಇದನ್ನೆಲ್ಲ ಮಾಡಿಟ್ಟನಾ? ದೊಡ್ಡವರಿಗೆ ಹೀಗಾದರೆ ಸಹಿಸಬಹುದು, ಆದರೆ ಏನೂ ಅರಿಯದ ಪುಟಾಣಿಗಳಿಗೆ ಹೀಗಾಗುವುದನ್ನು ಸಹಿಸಬಹುದೇ? ಇಲ್ಲ, ಸಾದ್ಯವೇ ಇಲ್ಲ ತಾನೆ. ಹಾಗಾದರೆ ಇದೆಲ್ಲವೂ ಸರಿಯಾಗಬಹುದೇ!? ಅದೇನೋ ನಾನರಿಯೆ! ಆದರೂ ಸರಿಯಾಗಬೆಕೆನ್ನುವುದು ನನ್ನ ಕನಸಿನ ಲೋಕದಲ್ಲೊಂದು ಕನಸು...
ಇದೆಲ್ಲವನ್ನು ಕೇಳಿದರೂ, ನೋಡಿದರೂ ಅಸಡ್ಡೆಯಿಂದ ಸ್ವಾರ್ಥಿಗಳಾಗಿ ಬದುಕುವ ಮಾನವ ರೂಪಿ ವಾನರೇ ಯೊಚಿಸಿ, ಒಂದೊಮ್ಮೆ ಈ ಸ್ಥಿತಿ ನಿನ್ನದಾಗಿದ್ದಲ್ಲಿ! ನೀ ತಿನ್ನುವ ಮೃಷ್ಟಾನ್ನದ ಬದಲು ನಿನ್ನ ಮುಂದೆ ತಿಪ್ಪೆ ರಾಶಿಯ ತುಂಡು ರೊಟ್ಟಿ ಬಂದು ಬಿದ್ದರೆ! ನೀ ಹಾಕುವ ಕೊಟಿನ ಬದಲು ಚಿಂದಿ ಬಟ್ಟೆ ಬಂದರೆ! ಯೊಚಿಸುವುದನ್ನೂ ಸಹಿಸಲಾರದು ತಾನೆ...
ಕನಸುಗಳ ಸಾಮ್ರಾಜ್ಯ ಕಟ್ಟಲು ಹೊರಟ ನನಗೆ ಕನಸುಗಳೇ ಬಾರದ ಭಯಾನಕ ಸ್ಥಿತಿ! ಆದರೂ ಕಂಡೆನೊಂದು ಕನಸು. ಎಲ್ಲವೂ ಸರಿಯಾಗುವುದೆಂಬ ಕನಸು! ಆದರೂ ಅದರ ಮಾರ್ಗ ತಿಳಿಯದ ಕೊರಗು. ಮಾನವೀಯತೆ ಮೆರೆಯುವರೆ, ನನ್ನೀ ಭಾರತದ ಬಲ್ಲಿದರೆಂಬ ಭೂಪರು! ಧನಿಕರ ಮನದಲ್ಲಿ ಅರಳಬಹುದೇ, ಬಡವರ ಮೇಲೊಂದು ಕನಿಕರ! ಬುದ್ದಿವಂತ ಸಮಾಜ ಒಟ್ಟಾಗುವುದೇ, ಮುದ್ದು ಮನಸುಗಳ ಕಣ್ಣೀರೊರೆಸಲು! ಎಲ್ಲವೂ ವಿವರಗಳಿಲ್ಲದ ಕನಸಿನ ಪುಟ್ಟ ಪುಟ್ಟ ಪ್ರಶ್ನೆಗಳು... ಎಲ್ಲದಕ್ಕೂ ಹೌದು ಎಂಬ ಸಂಪ್ರೀತಿಯ, ಸಡಗರದ, ಸುವಾಸನೆಯ, ಸಂವೃದ್ದಿಯ, ಎಲ್ಲದಕ್ಕೂ ಹೆಚ್ಚಾಗಿ ಮಾನವೀಯತೆಯ ಕೂಗು ಹೊರ ಹೊಮ್ಮಲಿ ಎಂಬುದೇ ನನ್ನ ಕನಸಿನಾಳದ ಕನಸು...

ಭಾರತವ ಬಡವಾಗಿಸಿದ ಜಾತೀಯತೆ!!!

ತಿಳಿಯುತಿಲ್ಲೆನಗೆ ಜಾತಿ ಧರ್ಮಗಳ ಮರ್ಮ,
ಅರಿಯುತಿಲ್ಲೆನಗೆ ಜಾತಿ ಧರ್ಮಗಳ ಕರ್ಮ,
ಬೇಕಿಲ್ಲೆನಗೆ ಜಾತಿ ಧರ್ಮಗಳ ವರ್ಣ!

ಧರ್ಮದ ಹೆಸರಿನಲ್ಲಿ ಅಧರ್ಮ ರಾರಾಜಿಸುತ್ತಿರುವ ಕಾಲ, ಹೃದಯದಲ್ಲಿರಬೇಕಾದ ಧರ್ಮ ಅಧರ್ಮವಾಗಿ ಮೈಮೇಲೆ ಬಂದು ನಿಂತ ಕಾಲ, ಧರ್ಮಕ್ಕಾಗಿ ಅಧರ್ಮವನ್ನು ಪೋಷಿಸುವ ಕಾಲ, ಪ್ರೀತಿ ಅಹಿಂಸೆಗಳ ಸಾರುವ ಧರ್ಮದ ಹೆಸರಲ್ಲಿ ರಕ್ತ ಕೋಡಿ ಹರಿಸುವ ಕಾಲ, ಧರ್ಮವೇನೆಂದರಿಯದೆ ಧರ್ಮದ ಹೆಸರ ಅಪ್ಪಿ ಅಧರ್ಮವ ಕಟ್ಟಿಕ್ಕೊಂಡ ಕಾಲ. ಬಡವಾಯಿತೇ? ಹೊಲಸಾಯಿತೇ? ಅಧರ್ಮದ ಬೀಡಾಯಿತೇ? ಎಲ್ಲ ಧರ್ಮಗಳ ಅಪ್ಪಿ ಹಿಡಿದ ಈ ನಮ್ಮ ಭಾರತ! ಇಲ್ಲ, ಇಲ್ಲ, ಆಗಬಾರದು. ಎದ್ದೇಳಿ ಬಾರತೀಯರೇ ಒದ್ದೋಡಿಸಿ ಜಾತೀಯತೆಯ.
ಮನದ ಸುವಾಸನೆ ಹೆಚ್ಚಿಸಲು ಸಿಕ್ಕ ಧರ್ಮವೆಂಬ ಸುಗಂಧಕ್ಕೆ  ಬೆಂಕಿ‌ ಇಟ್ಟು ಮನಸುಗಳ ಕರಕಲು ಮಾಡುತ್ತಿರುವವರು ಯಾರು?
ಧರ್ಮವೆಂಬುದು ಮನುಷ್ಯನ ಅಂತರ್ಶುದ್ದಿಗೆ, ಆತ್ಮ ಸಂತೃಪ್ತಿಗೆ, ಒಳಿತಿನ ಸಂವೃದ್ದಿಗೆ ಅವಶ್ಯಕ. ಒಮ್ಮೆ ಇದರಿಂದ ಒಬ್ಬನ ಅಂತರ್ಶುದ್ದಿಯಾಯಿತೆಂದರೆ ಅವನ ಬಾಹ್ಯ ಪ್ರಜ್ವಲಿಸುತ್ತದೆ. ಧರ್ಮವೆಂದೂ ಮನುಷ್ಯನ ಬಾಹ್ಯ ಪ್ರಪಂಚಕ್ಕೆ ಅಂಟಿಕೊಳ್ಳಬಾರದು, ಧರ್ಮ ಮನಸ್ಸಿನಾಳದಲ್ಲಿ ಒಳಿತನ್ನು ಹೊರಸೂಸುವ, ಕೆಡುಕನ್ನು ತಡೆಯುವ ಶಕ್ತಿಯಾಗಿ ಇರಬೇಕು. ಆದರೆ ಇಂದು ಎಲ್ಲವೂ ಅಲ್ಲೋಲ ಕಲ್ಲೋಲ, ಎಲ್ಲರಿಗೂ ಧರ್ಮವಿದೆ ಆದರೆ ಅದು ಬಾಹ್ಯಕ್ಕೆ ಮಾತ್ರ. ಅಂತರಾಳದಲ್ಲಿ ಧರ್ಮವೆಂಬುದೇ ಅವನಿಗರಿಯದು! ಆದರೂ ಕೂಗಾಡುವನು, ಬಡಿದಾಡುವನು ಧರ್ಮಕ್ಕಾಗಿ ಎಂದು, ಆದರೆ ಅವನಿಗರಿಯದು ಅದೆಲ್ಲವೂ ಅಧರ್ಮಕಾಗಿ ಎಂದು. ಆತ ಧರ್ಮವನ್ನು ಪ್ರೀತಿಸುವನು, ಗೌರವಿಸುವನು, ಆದರೂ ಆತ ಅರಿವಿಲ್ಲದೆ ಧರ್ಮಕ್ಕಾಗಿ ಎಂಬಂತೆ ಅಧರ್ಮದ ದಾರಿ ಹಿಡಿಯುವನು. ಎಂತಹ ವಿಪರ್ಯಾಸ ಅಲ್ಲವೇ? ಇನ್ನೊಂದು ಕಡೆ ಜಾತೀಯತೆಯ ಮೆಟ್ಟಿ ನಿಂತವರೆಂದು ಭ್ರಮಿಸಲ್ಪಟ್ಟ ಕೆಲವು ವಿದ್ಯಾವಂತರೆಂಬ ಕಟ್ಟಾ ಜಾತೀಯತೆಯ ಕದೀಮರು. ಇವರಿಗೆ ಪ್ರೀತಿ ಪ್ರೆಮಗಳಿಗೆ ಮಾತ್ರ ಜಾತೀಯತೆ ಇಲ್ಲ!!! ಹೇಳುವ ಧರ್ಮದ ಪರಿದಿಯಲ್ಲಿ ಬರುವ ದೇವರಿಗೆ ಒಂದು ನಮನ ಸಲ್ಲಿಸಲೂ ಇಷ್ಟಪಡದ ಹುಂಬರು, ಆದರೂ ಕಚ್ಚಾಟಕ್ಕೆ ಇವರಿಗೆ ಧರ್ಮ ಇದೆ!!! ಇವರೇತಕ್ಕೆ ಹೀಗೆ ಎಂಬುದ ಆ ದೇವರೇ ಬಲ್ಲ! ಎಲ್ಲರೂ ಒಂದೊಂದು ಧರ್ಮದ ಅನುಯಾಯಿಗಳಾಗಿ ಕಾಣಿಸುವರು, ಒಬ್ಬ @ ಧರ್ಮ ಇನ್ನೊಬ್ಬ # ಧರ್ಮ, ಮತ್ತೊಬ್ಬ * ಧರ್ಮ ಮಗದೊಬ್ಬ & ಧರ್ಮ. ಹೀಗೆ ಹಲವು ಧರ್ಮಗಳ ಹಲವು ಜನ ಆದರೆ ಎಲ್ಲರೂ ಮನುಷ್ಯ ಕುಲದವರು! ದುರಾದೃಷ್ಟ ಎಂದರೆ ಇವರಲ್ಲಿ ಹಲವರು ಮನುಷ್ಯ ಕುಲವನ್ನು ಮರೆತ ಲದ್ಧಿಜೀವಿಗಳು! ಇವರಿಗೆಲ್ಲ ಲದ್ಧಿ ತುಂಬಲು ಗುಂಪು ಕಟ್ಟಿ ಕುಳಿತಿರುವ ನೇತಾರರೆಂಬ ಲದ್ಧಿ ಉತ್ಪಾದಕರು! ಈ ಲದ್ಧಿಯಿಂದ ನಶೆಯೇರಿ ಹುಚ್ಚರಾಗುವ ಪಾಪಿಗಳು. ಎಲ್ಲವೂ ಅರ್ಥಹೀನ...ಇದೆಲ್ಲದರ ಮದ್ಯೆ ಕೆಲವು ರಾಜಕಾರಣಿಗಳೆಂಬ ಲದ್ಧಿ ಪ್ರಚಾರಕರು, ಇವರು ಪ್ರಚಾರಕ್ಕಾಗಿ ಲದ್ಧಿ ತಿನ್ನುವುದಲ್ಲದೆ ಲದ್ಧಿ ತಿಂದವರ ಲದ್ಧಿಯನ್ನೂ ಬಿಡದ ನೀಚರು.
ರಾಜಕೀಯದಿಂದ ಒಂದು ಧರ್ಮದ ಉನ್ನತಿ ಅಥವಾ ಅವನತಿ ಸಾದ್ಯವೇ? ಎಂದಿಗೂ ಇಲ್ಲ! ಇಂದಿನ ರಾಜಕೀಯ ನಂಬಿದವರಿಗೆ ಮಸಿ ಬಳಿಯುವುದೇ ಹೊರತು ಒಳಿತನ್ನೆಂದೂ ಮಾಡಲಾಗದು. ಧರ್ಮವನ್ನು ಪ್ರೀತಿಸುವ ಜನ ಧರ್ಮವನ್ನು ತಮ್ಮ ಚಟುವಟಿಕೆಗಳಲ್ಲಿ ರೂಡಿಸಿಕೊಳ್ಳಬೆಕು ಆಗ ಅದಕ್ಕೊಂದು ಅರ್ಥ ಸಿಗುತ್ತದೆ, ಧರ್ಮವನ್ನು ಒಬ್ಬರ ಮೇಲೆ ಹೇರುವುದರಿಂದ ಅಥವಾ ಅದರ ಹೆಸರಲ್ಲಿ ಬಡಿದಾಡುವುದರಿಂದ ಏನೂ ಸಾಧಿಸಲಾಗದು. @ ಧರ್ಮದವನು # ಧರ್ಮವನ್ನು ದುರ್ವ್ಯಾಖ್ಯಾನಿಸುವುದರಿಂದಲೋ, # ಧರ್ಮ/ಧರ್ಮಾನುಯಾಯಿಯನ್ನು ದ್ವೇಷಿಸುವುದರಿಂದಲೋ # ಧರ್ಮದ ಅವನತಿಯೊ,@ಧರ್ಮದ ಉನ್ನತಿಯೋ ಆಗಲಾರದು. ಇದೆಲ್ಲವನ್ನು ತಿಳಿದಿದ್ದರೂ ಹುಚ್ಚು ಜಾತಿ ರಾಜಕಾರಣಕ್ಕೆ, ಕ್ರೂರ ಜಾತಿ ಸಂಘಟನೆಗಳಿಗೆ ತಲೆ ಭಾಗುವ ಜನಗಳೆ ಒಮ್ಮೆ ಯೊಚಿಸಿ... ನಮಗೆ ಬೇಕಾಗಿರುವುದು ಭಾರತವೋ ಅಥವಾ ಹುಚ್ಚು ಜಾತೀಯತೆಯೋ!!! ಯಾವುದೇ ಧರ್ಮದ ನೈಜ ಅನುಯಾಯಿಗೆ ಎಂದಿಗೂ ಹಿಂಸೆಯಾಗಲೀ, ಜಾತೀಯತೆಯಾಗಲಿ, ರಾಷ್ಟ್ರದ್ರೊಹವಾಗಲೀ ಬೇಕಿಲ್ಲ ಅದೆಲ್ಲವೂ ಅವನಿಗೆ ಧರ್ಮ ದ್ರೊಹವೇ ಆಗಿರುತ್ತದೆ, ಅದು ಅವನಿಗೆ ಆತ್ಮ ವಂಚನೆಯ ಕಹಿಯನ್ನೆ ಕೊಡುತ್ತದೆ. ಇಂದಿನ ಭಾರತದಲ್ಲಿ ನಾಯಕರೆನಿಸಿಕೊಂಡವರು ತಮ್ಮ ಸ್ವಾರ್ಥಕ್ಕಾಗಿ ಧರ್ಮ ಧರ್ಮಗಳ ಮದ್ಯೆ ವಿಷಬೀಜ ಬಿತ್ತಿ ಎಲ್ಲರಿಗೂ ಅಧರ್ಮವನ್ನು ದಯಪಾಲಿಸಿ ಮೆರೆಯುತ್ತಿದ್ದಾರೆ. ಅವರು ಜನರಿಗೆ ತಿಳಿಯದೆ ಶಕುನಿಯಾಗಿ ಭಾರತಕ್ಕೆ ರಾಕ್ಷಸರಾಗಿದ್ದಾರೆ. ಇವರ ಈ ಹುಚ್ಚಾಟಕ್ಕೆ ಕಡಿವಾಣ ಬೀಳಬೆಕಾದರೆ ಪ್ರತಿಯೊಬ್ಬನು ತನ್ನ ಧರ್ಮವನ್ನು ತನ್ನ ಹೊರ ಮೈಯಿಂದ ಹೃದಯಾಂತರಾಳಕ್ಕೆ ಇಳಿಸಿಕೊಳ್ಳಬೇಕು.
ಎಲ್ಲರು ಮಾನವರಾಗಿ ಧರ್ಮ ಜಾತಿ ಮರೆತು ಮುನ್ನುಗ್ಗಬೇಕು. ಇದರೊಂದಿಗೆ ತಮ್ಮ ಧರ್ಮದ ಅವನತಿಯಾಗಬಹುದೆಂಬ ದಡ್ಡ ಭಯದಿಂದ ಹುಚ್ಚೆದ್ದಿರುವ ಧಾರ್ಮಿಕ ನಾಯಕರೆಂದುಕೊಂಡಿರುವ ಬಂಡ ನಾಯಕರು ನಿಜವಾದ ಧಾರ್ಮಿಕತೆ ಅರಿತು, ಧರ್ಮಕ್ಕೆ ಬೆನ್ನೆಲುಬಾಗಿ, ಜನರಿಗೆ ಒಳಿತಿನ ಆದರ್ಶವಾಗಿ ನಿಲ್ಲಬೇಕು.

ಮುದ್ದಿನ ಭಾರತದ ಹುಂಬ ಪ್ರಜೆಗಳೇಕೆ ಹೀಗಾದರು? ಇಷ್ಟೊಂದು ಮಂಕು ಬೂಧಿ ಯಾರು ಎರಚಿದರು? ಇದರಿಂದ ಹೊರ ಬರಲು ಸಾದ್ಯವಿಲ್ಲವೇ? ಯಾತಕ್ಕೆ ಬೇಕು ಈ ಜಾತೀಯತೆ? ಇದರಿಂದ ಸ್ವಾರ್ಥಿಗಳಾದ ಅಧರ್ಮೀಯರಿಗಲ್ಲದೆ ಸಜ್ಜನರಿಗೆ ಒಳಿತಿದೆಯೆ? ನೀವು ಸಜ್ಜನರಾಗ ಬೆಕಿಲ್ಲವೇ?! ಅಧರ್ಮದ ಹೊಲಸಿನಿಂದ ಮುಕ್ತರಾಗ ಬೇಕಲ್ಲವೇ? ನಿನ್ನ ಮನದಾಳದ ದೇವರು ನಿನ್ನ ಹೊಲಸು ಕಾರ್ಯಗಳ ಒಪ್ಪುವನೆ?

ಕಥೆಯಾದ ಬದುಕೆಂಬ ಕನಸು-೧

ಪಾರಂಪರಿಕ ಸ್ವತ್ತಾದ ವಿದ್ಯೆ...
ಅವನೊಬ್ಬ ವಿದ್ಯಾವಂತ ಶ್ರೀಮಂತ! ಅವನದೊಂದು ಸುಂದರ ಲೋಕ. ಅಲ್ಲಿ ಅವನಿಗೆ ಯಾವುದಕ್ಕೂ ಕೊರತೆಯಿಲ್ಲ. ಅವನದೊಂದು ದೊ(ದ)ಡ್ಡ ಕಥೆ.
ಇವನಿಗೆ ಹತ್ತು ಜನರಿಗೆ ಬೇಕಾದಷ್ಟು ಗಳಿಕೆಯಾಗುತ್ತಿತ್ತು. ಇದೇ ಇವನ ಐಶಾರಾಮಿ ಜೀವನದ ಗುಟ್ಟು! ಈ ಹುಂಬತನದ ಹೆಸರಲ್ಲಿ ಹತ್ತಕ್ಕೆ ಬದಲಾಗಿ ನೂರನ್ನು ವ್ಯಯಿಸುತಿದ್ದ. ಆದರೆ ಅಲ್ಲೇ ಇನ್ನೊಬ್ಬ ಇವನಿಗಿಂತ ಬುದ್ದಿವಂತ, ಶಕ್ತಿವಂತ. ಆದರೆ ಅವನಿಗೆ ಬಡತನ. ಹತ್ತಕ್ಕೆ ಬದಲಾಗಿ ಒಂದನ್ನು ವ್ಯಯಿಸಬೇಕಾದ ಅನಿವಾರ್ಯತೆ. ಇವನ ಬಡತನಕ್ಕೆ ಕಾರಣ ದಕ್ಕದ ನೈಜ ವಿದ್ಯೆ! ಇದರಿಂದ ಕೆಲಸವಿಲ್ಲ/ಇದ್ದರೂ ಆ ಕೆಲಸದಿಂದ ಸಿಗುವುದು ಅಷ್ಟೇ. ಆದರೆ ದುಡಿಮೆ ಮಾತ್ರ ಹತ್ತರಷ್ಟು.
ಶ್ರೀಮಂತನ ನೈಜ ವಿದ್ಯೆಗೆ ಅಪ್ಪನ ಶ್ರೀಮಂತಿಕೆಯೇ ಕಾರಣ, ಹಾಗೆಯೇ ಬಡವ ನೈಜ ವಿದ್ಯೆಯಿಂದ ವಂಚಿತನಾಗಲು ಪಾರಂಪರಿಕ ಬಡತನವೇ ಕಾರಣ. ಹೀಗೆ ದೇಶದ ಸಂಪತ್ತು ಸಂವೃದ್ದವಾದರೂ ಬಡವರ ಪರಂಪರೆ ಕೊನೆಯಿಲ್ಲದೆ ಸಾಗುತ್ತದೆ. ದೇಶದ ಸಂಪತ್ತು ಎಲ್ಲರಿಗೂ ಬೇಕಾದಷ್ಟು ಇದ್ದರೂ ಅರ್ದಕ್ಕಿಂತ ಹೆಚ್ಚು ಜನ ಬಡವರು! ಇದೆಂತಹ ವಿಪರ್ಯಾಸ! ಒಂದೇ ದೇಶದ ಜನ, ಆದರೆ ಕೆಲವರು ಐಶಾರಾಮಿಗಳು ಇನ್ನು ಕೆಲವರು ತುತ್ತು ಅನ್ನಕ್ಕಾಗಿ ಕಷ್ಟ ಪಡುವವರು! ಬಲ್ಲಿದನಿಗೆ ಬಡವನ ಬವಣೆ ನೋಡುವ ಇಚ್ಛೆಯೇ ಇಲ್ಲ. ಸ್ವಾರ್ಥ, ನನಗೆ ಲಬಿಸಿದ್ದು ನನಗೆ ಮಾತ್ರ, ಇದು ನನ್ನ ಸಾಮರ್ತ್ಯದಿಂದ ಲಭಿಸಿದ್ದೆಂಬ ಭ್ರಮೆ. ಮನುಷ್ಯ ಸಂಘಜೀವಿ ಎಂಬುದನ್ನು ಮರೆತ ಹುಂಬ. ತಾನು ಬಯಸುವ ವಿದೇಶಿ ವಸ್ತುಗಳಿಂದ ದೇಶ ಬರಿದಾಗುವುದೆಂಬ ಅರಿವಿಲ್ಲದ ಮುಟ್ಟಾಳ, ಇದಕ್ಕಾಗಿ ತಾನು ಕೊಡುವ ನೂರರಿಂದ ಹತ್ತು ಜನರ ಅವಶ್ಯಕತೆ ನೀಗುವುದೆಂಬ ಪರಿಜ್ಞಾನವಿಲ್ಲದ ಅಂಧ.
ಯಾವ ಶತಮಾನದಲ್ಲಿ ಈ ಅಸಮಾನತೆಯ ಕೊನೆ? ಯಾವಾಗ ಎಲ್ಲರಿಗೂ ಸಮಾನವಾದ ಶಿಕ್ಷಣ ಲಭ್ಯ? ಯಾವಾಗ ಎಲ್ಲರಿಗೂ ಈ ದೇಶದ ಸಂಪತ್ತಿನಲ್ಲಿ ಸಮಾನ ಪಾಲು ಲಭ್ಯ? ಹೀಗೇ ನೂರೊಂದು ಪ್ರಶ್ನೆಗಳ ಕಲರವ, ಉತ್ತರದ ಬೆನ್ನು ನಮ್ಮ ಮುಂದೆ ಕೈಗೆ ಎಟುಕುವಷ್ಟು ಹತ್ತಿರವಿದ್ದರೂ ಹಿಡಿಯಲಾಗದ ಅಸಹಾಯಕತೆ. ಹೊಡೆದುರುಳಿಸುವ ಯೋಚನೆ ಬಂದರೂ ಸತ್ತು ಹೋದರೆ ಏನು ಗತಿ ಎಂಬ ಭಯ!
ಇದು ಬದುಕಿನ ಭಯಾನಕತೆ(ಕಥೆ)!!!
ಇಲ್ಲೊಂದು ಕನಸ ಕಾಣೋಣ ಬನ್ನಿ.....
ಅದೊಂದು ಸುಂದರ ದೇಶ ಅಲ್ಲಿ ಸಂತೋಷ ಸಂವೃದ್ದಿಗಳ ಕಲರವ. ಎಲ್ಲರೂ ಸಂತೃಪ್ತರು, ಎಲ್ಲರಿಗೂ ಬೇಕಾದಷ್ಟು ವಿದ್ಯೆ, ಬೇಕಾದಷ್ಟು ಕೆಲಸ, ಎಲ್ಲ ಕೆಲಸಗಳಿಗೂ ಕೈ ತುಂಬಾ ಸಂಬಳ. ನಿಪುನನಿಗೆ ಆರಾಮದಾಯಕ ಕೆಲಸ, ದಡ್ಡನಿಗೆ ಪರಿಶ್ರಮದ ಕೆಲಸ. ಇದೇ ಇಲ್ಲಿನ ಮಾನದಂಡ. ಜ್ಞಾನಾರ್ಜನೆ ಮಾಡುವವನ ಮೆದುಳಿಗೆ ಶ್ರಮ, ಜ್ಞಾನಾರ್ಜನೆ ಬೇಡವಾದರೆ ದೇಹ ಪರಿಶ್ರಮ. ಏನೇ ಆದರೂ ಎಲ್ಲರಿಗು ಸಮಾನತೆ, ತನ್ನ ಜೀವನ ತಾನೇ ರೂಪಿಸುವ ಸುಂದರ ಅವಕಾಶ. ಬಡವನಿಲ್ಲ ಬಲ್ಲಿದನಿಲ್ಲ, ತನ್ನ ಮನಸ್ಸಿಗೆ ಹತ್ತಿರವಾದವನೇ ಸ್ನೇಹಿತ, ಅವನ ಬಗ್ಗೆ ಬೇರೇನೂ ತಿಳಿಯಬೇಕಿಲ್ಲ.
ಶಿಕ್ಷಣದ ಪೂರ್ಣ ಜವಾಬ್ದಾರಿ ಆಡಳಿತಕ್ಕೆ. ಆಡಳಿತವಂತು ಅನುಗ್ರಹೀತ, ತನ್ನವರಿಗಾಗಿ ಕೆಲಸ ಮಾಡುತ್ತಿರುವೆನೆಂಬ ಹುಮ್ಮಸ್ಸು, ಗಳಿಕೆಗನುಗುಣವಾಗಿ ಎಲ್ಲ ಜನರಿಂದಲೂ ಪಡೆದು ಎಲ್ಲರಿಗೂ ಸಮಾನವಾಗಿ ಅವಶ್ಯಕತೆಗಳ ಪೂರೈಸುವ ನಿಷ್ಠೆ. ಹೀಗೆ ಅವಶ್ಯಕತೆಗಳಲ್ಲಿ ತಾರತಮ್ಯವಿಲ್ಲದ ಸುಂದರ ಸಮಾಜ. ರಾಜಕೀಯ ಎಂಬುದು ಇಲ್ಲಿ ಸಜ್ಜನ, ನಿಷ್ತಾವನ್ತರಾದ ಸೇವಕರ ನೆಲೆ. ಇಲ್ಲಿ ಸೇವೆ ಮಾಡಲು ಸ್ಪರ್ದಿಸುವರೆ ಹೊರತು ಹಣ, ಅಧಿಕಾರಕ್ಕಲ್ಲ.
ಇಲ್ಲಿ ಕಾವಲುಗಾರನ ಮಗ ವಿಜ್ಞಾನಿಯಾಗಬಲ್ಲ, ಹಾಗೆಯೇ ವಿಜ್ಞಾನಿಯ ಮಗ ಕಾವಲುಗಾರನೂ ಆಗಬಲ್ಲ! ಎಲ್ಲವೂ ಅವನವನ ಸಾಮರ್ತ್ಯದ ಮೇಲೆ ಅವಲಂಬಿತ, ಎಲ್ಲೂ ಆತನ ಪರಂಪರೆಯ ಲಾಬ ನಷ್ಟಗಲಿಲ್ಲ. ಮೀಸಲಾತಿಯಂತು ಬೇಡವೇ ಬೇಡ.
ಬನ್ನಿ ಹೊರಡೋಣ ಈ ದೇಶದತ್ತ. ಹೆಜ್ಜೆಯ ಮೇಲೆ ಹೆಜ್ಜೆಯಿಟ್ಟು ಹೋಗೋಣ ಬನ್ನಿ. ಬಲ್ಲಿದನು ಬಡವನ ಕೈಯ ಹಿಡಿದು, ಬಡವನು ಬಲ್ಲಿದನ ಕೈಯ ಹಿಡಿದು ಸಾಗೋಣ ಬನ್ನಿ ನನ್ನ ಕರುನಾಡಿನ ಪ್ರಜೆಗಳೇ, ಹಾಗೆಯೇ ನನ್ನ ಭಾರತೀಯ ಪ್ರಜೆಗಳೇ.
ಕೈ ಹಿಡಿಯುವಿರಿ ಅಲ್ಲವೇ......

ಆಕಾಶದ ಅಂಚಿನಿಂದ ಕಂಡ ಮನುಷ್ಯರಿಲ್ಲದ ಈ ಲೋಕ..

ಓ ದೇವರೇ ಇದೆಂತಹ ಲೋಕ?
ಎಲ್ಲೆಲ್ಲೂ ರಾಕ್ಷಸರೇ! ಅವರಂತೂ ನಿಜವಾದ ರಾಕ್ಷಸರಾಗಿದ್ದರೆ ಎಷ್ಟೋ ಒಳ್ಳೆಯದಾಗುತಿತ್ತು!! ಆದರೆ ಇದು ಮನುಷ್ಯ ರಾಕ್ಷಸರ ಲೋಕ!!!
ಅಬ್ಬಾ ಏನಿದರ ಭಯಾನಕತೆ! ಧಿಗಂತಗಳೇ ಕಣ್ಣೀರಿನಲ್ಲಿ ಮುಳುಗುವಂತಾ ಕ್ರೌರ್ಯ, ಮನುಷ್ಯತ್ವ ಚಪ್ಪಲಿಯಂತೆ ತುಳಿಯಲ್ಪಟ್ಟ ಸಮಾಜ, ಭಾವನೆ ಬಾಂಧವ್ಯಗಳು ಲೆಕ್ಕಕಿಲ್ಲದ ಆಟ, ದಿನವೂ ಬೀಳುವ ರಕ್ತದಿಂದ ಬೆಂದುಹೋದ ಭೂಮಿ, ಕಂಡು ಸಹಿಸಲಾಗದೆ ದೂರಹೂಗುವ ತಯಾರಿಯಲ್ಲಿರುವ ಚಂದ್ರಮ, ಎಲ್ಲದರ ನಡುವೆ ಈ ರಾಕ್ಷಸೀಯ ಕುಲವನ್ನೇ ಸುಡುವತ್ತ ಹೆಜ್ಜೆ ಇಟ್ಟಿರುವ ಸೂರ್ಯ, ಒಟ್ಟಿನಲ್ಲಿ ಸೃಷ್ಟಿಕರ್ತನನ್ನೇ ಎದುರು ಹಾಕಿಕೊಂಡ ನೀಚ ಸಮೂಹ. ಆದರೂ ಇವರು ಸದ್ಯಕ್ಕೆ ಸುರಕ್ಷಿತರಾಗಿದ್ದಾರೆ, ಏಕೆಂದರೆ ಇವರ ಮದ್ಯೆ ಕೆಲವು ನೈಜ ಮನುಷ್ಯರಿದ್ದಾರೆ! ಈ ಅಲ್ಪಸಂಖ್ಯಾತ ಮನುಷ್ಯರಿಗಾಗಿಯೇ ತಾಳ್ಮೆಯಿಂದಿರುವ ಸೃಷ್ಟಿ ಕರ್ತನಿಗಿದೂ ನನ್ನ ನಮನ...
ಈ ಲೋಕದತ್ತ ಒಂದು ನೋಟ:
ಒಂದು ಕಡೆಯಲ್ಲಿ ಕೆಲಸ, ಹಣ ಮತ್ತು ಮೋಜಿನ ಜೀವನ ಇಷ್ಟೇ ತಿಳಿದಿರುವ ಬುದ್ದಿವಂತರೆಂದು ತಿಳಿದಿರುವ ಬುದ್ದಿಮಾಂದ್ಯರುಗಳ ಅಸಹ್ಯ ಸಮೂಹ, ಅಲ್ಲೇ ಅವರ ಸೊಕ್ಕಿನ ಕೊಂಬಾಗಿ ಬೆಳೆದ ಕ್ರೂರ ನಾಯಕತ್ವ. ಇವರ ಕ್ರೌರ್ಯಕ್ಕೆ ಸಿಕ್ಕು ಜರ್ಜರಿತವಾಗಿ ಇದ್ದೂ ಇಲ್ಲವಾದ ಸಮೂಹ ಇನ್ನೊಂದು ಕಡೆ.
ಇದರೊಂದಿಗೆ ಚಿನ್ನದಂತೆ ಪರಿಶುದ್ದರಾಗಲು ಧರ್ಮದ ದಾರಿ ಹಿಡಿದು ಹೊರಟು ದಾರಿ ತಪ್ಪಿ ಕಬ್ಬಿಣದಂತಾದ ಪಥಬ್ರಷ್ಟರು, ಇವರಂತೂ ದಾರಿ ತಪ್ಪೂದರೊಂದಿಗೆ ಬುದ್ದಿ ಕಳೆದುಕೊಂಡು, ಇತರರನ್ನು ಕೊಲ್ಲೂದಕ್ಕಗಿ ತಾವೇ ನಶಿಸುವ ಅರ್ಥಹೀನ ರಾಕ್ಷಸರು. ದರ್ಮದ ಮುಖವಾಡ ಹೊತ್ತ ಶೈತಾನನೆಂಬ ಅಯಸ್ಕಾಂತವೆ ಇವರ ಆದಾರ, ಈ ಅಯಸ್ಕಾಂತವು ಪಥಬ್ರಷ್ಟರನ್ನು ಸೆಳೆದುಕೊಂಡು ತನ್ನ ಸಾಮ್ರಾಜ್ಯ ವಿಸ್ತರಿಸುತ್ತಿದೆ. ಇದಕ್ಕೆ ಅನುಕೂಲವೆಂಬಂತೆ ದಾರ್ಮಿಕ ಜ್ಞಾನದ ಕೊರತೆಯೊಂದಿಗೆ ಇತರೆ ಸಾಮಾಜಿಕ ಕಾರಣಗಳಿಂದ ಪಥಬ್ರಷ್ಟರಾಗಿ ಇವರತ್ತ ವಾಲುತ್ತಿರುವ ಯುವ ಸಮೂಹ. ಈ ಕುಲವು ಇಡೀ ವಿಶ್ವದಲ್ಲಿ ಜ್ವಾಲಾಮುಖಿಯಾಗಿ ಹರಡಿ, ಎಲ್ಲಿ ಯಾವಾಗ ಬೇಕಾದರೂ ರಕ್ತ ಹರಿಯಬಹುದು ಎಂಬಷ್ಟು ಕಟೋರವಾಗಿದೆ.
ಇನ್ನೊಂದು ಮುಉಲೆಯಲ್ಲಿ ಯಾವುದನ್ನೂ ತಿಳಿಯದೆ ದಿನದಲ್ಲಿ ಒಂದು ತುತ್ತು ಅನ್ನಕ್ಕಾಗಿ ಹಪಹಪಿಸುವ ಸಣಕಲು ದೇಹಗಳು. ಇದನ್ನೆಲ್ಲಾ ಕಂಡರೂ/ಕೇಳಿದರೂ ಒಂದೂ ತಿಳಿಯದಂತೆ ತಮ್ಮ ಸಾಮ್ರಾಜ್ಯ ಸಮೃದ್ದ ಗೊಳಿಸುವತ್ತ ಕಣ್ಣು ನೆಟ್ಟಿರುವ ಧನ ದಾಹಿ ಹಣವಂಥರೆನಿಸಿಕೊಂಡ ಹೆಣಗಳು. ಇವರಿಗೆ ತಿಂದು ತೆಗಿದರೂ ಸಾಲದು, ತಮ್ಮ ಖಾತೆಗಳಲ್ಲಿ ತಮಗೆ ಬೇಕಾದಷ್ಟಲ್ಲದೆ, ತನ್ನ ಸಂತತಿಗಳಿಗೆ ಬೇಕಾಗುವಷ್ಟು ಕೂಡಿಡುವ ಹೆಮ್ಮಾರಿತನ.
ಎಲ್ಲದರ ಮದ್ಯೆ ಈ ಲೋಕಕ್ಕೆ ರಕ್ಷೆಯಾಗಿ ಜೀವಿಸುತ್ತಿರುವ ನೈಜ ಮಾನವರು. ಇವರಲ್ಲಿ ಮನುಷ್ಯತ್ವದ ಭಂಡಾರವಿದೆ, ಮಧುರ ಭಾವನೆಗಳ ಸುಮಧುರ ಸ್ಪಂದನೆಗಳಿವೆ, ಎಲ್ಲದಕ್ಕೂ ಮಿಗಿಲಾಗಿ(ಕಾರಣ: ಇದರಿಂದಲೇ ಎಲ್ಲಾ ಸದ್ಗುಣಗಳೂ ಇವರಿಗೆ ಸಿಕ್ಕಿವೆ) ಸೃಷ್ಟಿಕರ್ತನ ಮೇಲೆ ಅಪಾರ ನಂಬಿಕೆ ಇದೆ.
ಇದು ಆಕಾಶದ ಅಂಚಿನಿಂದ ಕಂಡ ಲೋಕ. ಇನ್ನು ನನ್ನ ತಾಣ(ಭಾರತ-ಕರ್ನಾಟಕ)ದತ್ತ ಮೆಲ್ಲೆ ಮುಂದುವರಿಯುತ್ತೇನೆ.
ಸಜ್ಜನರ ಆಶೀರ್ವಾದ ಬೇಡುತ್ತಾ...

ಕನಸಿನ ಲೋಕಕ್ಕೆ ಸ್ವಾಗತ

ನನ್ನ ಕನಸಿನ ಲೋಕಕ್ಕೆ ಸ್ವಾಗತ!
ನೂರೊಂದು ಕನಸುಗಳ ನೂರೊಂದು ನೆನಪುಗಳ ನೂರೊಂದು ಮುಖಗಳ ನಿಲ್ಲದ ಕನವರಿಕೆಯೇ ಈ ಲೋಕದ ವಿಸ್ಮಯ.
ಇಲ್ಲಿ ರಾತ್ರಿಕನಸುಗಳಿಗಿಂತ ಹಗಲುಕನಸುಗಳೇ ಪ್ರಾಮುಖ್ಯ. ಇದು ನಮ್ಮ ಯೋಚನೆ, ಚಿಂತನೆಗಳೆಲ್ಲವೂ ಒಳಗೊಳ್ಳುವ ವಿಶಾಲ ಲೋಕ.
ಹಗಲುಕನಸುಗಳೆಂಬ ಅನಂತತೆಯ ಮೇಲೇರಿ ಪಯಣಿಸುವ ನಮಗೆ ಎಲ್ಲಿ ಬೇಕಾದರೂ ಹೋಗುವ ಸ್ವಾತಂತ್ರ್ಯ, ಅತೀವ ವೇಗ, ಜೀವನದ ಭವಿಷ್ಯವನ್ನೂ, ಭುತವನ್ನೂ ಸುತ್ತಾಡುವ ಅವಕಾಶ, ಈ ಪಯಣದಲ್ಲಿ ಎಲ್ಲವೂ ನಮ್ಮದೇ, ಯಾವುದೊಂದೂ ನಮಗೆದುರಿಲ್ಲ. ಒಟ್ಟಿನಲ್ಲಿ ನಾವೇ ನಮಗಾಗಿ ಕಟ್ಟುವ ನಮ್ಮದೇ ಸುಂದರ ಲೋಕ.
ಬನ್ನಿ ಸುತ್ತೋಣ ಈ ಕನಸಿನ ಲೋಕದಲ್ಲಿ ಒಂದು ಸುತ್ತು.....